ಪೂತಿಜನ್ಯ ಸಸ್ಯಗಳು  - 
ಅವಶ್ಯಕ ಜೈವಿಕ ವಸ್ತುಗಳಿಗಾಗಿ ಕೊಳೆತ ಅಥವಾ ಕೊಳೆಯುತ್ತಿರುವ ಸಸ್ಯಪ್ರಾಣಿಜನ್ಯ ಪದಾರ್ಥಗಳನ್ನಾಶ್ರಯಿಸಿ ಬದುಕುವ ಸಸ್ಯಗಳು (ಸ್ಯಾಪ್ರೋಫೈಟ್ಸ್).  ವಿವಿಧ ಬಗೆಯ ಬ್ಯಾಕ್ಟೀರಿಯಗಳು, ಲೋಳೆ ಬೂಸ್ಟುಗಳು (ಸ್ಲೈಮ್ ಮೋಲ್ಡ್ಸ್), ಶಿಲೀಂಧ್ರಗಳು ಹಾಗೂ ಕೆಲವು ಆವೃತ ಬೀಜಸಸ್ಯಗಳು ಈ ಗುಂಪಿಗೆ ಸೇರಿವೆ.  ಗೊಬ್ಬರ, ಸತ್ತಪ್ರಾಣಿ ಹಾಗೂ ಸಸ್ಯದೇಹಗಳಲ್ಲಿ ಇವು ವಾಸಿಸುವುವು.

ಪೂತಿಜನ್ಯ ಬ್ಯಾಕ್ಟೀರಿಯ ಹಾಗೂ ಶಿಲೀಂಧ್ರಗಳು ನಮ್ಮ ಅನುದಿನದ ಬದುಕಿನಲ್ಲಿ ಸಾಕಷ್ಟು ಪ್ರಭಾವ ಬೀರುತ್ತವೆ.  ಇವು ತಮ್ಮಲ್ಲಿರುವ ಕಿಣ್ವಗಳು ನೆರವಿನಿಂದ ಸತ್ತ ಪ್ರಾಣಿ ಹಾಗೂ ಸಸ್ಯದೇಹಗಳ ಕ್ಲಿಷ್ಟಸಂಯುಕ್ತಗಳನ್ನು ಸರಳ ಸಂಯುಕ್ತಗಳನ್ನಾಗಿ ಪರಿವರ್ತಿಸುವುವು.  ಇದರಿಂದಾಗಿ ಇವು ಪ್ರಕೃತಿಯ ಜಲಗಾರರೆಂದು ಪ್ರಸಿದ್ಧವಾಗಿವೆ.  ಆದರೆ, ಇದೇ ಕ್ರಿಯೆ ಹಣ್ಣು, ಆಹಾರ ಮತ್ತು ಮರದ ದಿಮ್ಮಿಗಳ ಹಾಳಾಗುವಿಕೆಗೂ ಕಾರಣ.  ಬ್ಯಾಕ್ಟೀರಿಯಮ್ ಲ್ಯಾಕ್ಟಿಕ್ ಆಸಿಡೈ ಎಂಬುದು ಹಾಲಿನ ಲ್ಯಾಕ್ಟೋಸ್ ಸಕ್ಕರೆಯನ್ನು ಲ್ಯಾಕ್ಟಿಕ್ ಆಮ್ಲವನ್ನಾಗಿ ಪರಿವರ್ತಿಸುವುದರಿಂದ ಹಾಲು ಹೆಪ್ಪಿಟ್ಟು ಮೊಸರಾಗುತ್ತದೆ.  ಸೆಣಬು ಕಡ್ಡಿಗಳನ್ನು ನೀರಿನಲ್ಲಿ ಕೊಳೆ ಹಾಕಿದಾಗ ಕ್ಲಾಸ್ಟ್ರಿಡಿಯಮ್ ಬ್ಯೂಟಾರಿಕಸ್ ಎಂಬ ಬ್ಯಾಕ್ಟೀರಿಯ ಸೆಣಬಿನ ನಾರನ್ನು ಬಂಧಿಸುವ ಪೆಕ್ಟಿಕ್ ವಸ್ತುಗಳನ್ನು ಜೀರ್ಣಿಸಿ ನಾರು ಬೇರ್ಪಡಲು ನೆರವಾಗುತ್ತದೆ.  ಶರ್ಕರ ಪದಾರ್ಥಗಳ ಮೇಲೆ ಬೆಳೆಯುವ ಯೀಸ್ಟ್ ಶಿಲೀಂಧ್ರಗಳಲ್ಲಿರುವ ಜೈಮೇಸ್ ಗುಂಪಿನ ಕಿಣ್ವಗಳು ಸಕ್ಕರೆಯನ್ನು ಆಲ್ಕೊಹಾಲ್ ಮತ್ತು ಇಂಗಾಲದ ಆಕ್ಸೈಡುಗಳನ್ನಾಗಿ ವಿಭಜಿಸುತ್ತವೆ.  ಇದರಿಂದಾಗಿ ಯೀಸ್ಟ್ ಸಸ್ಯಗಳಿಗೆ ಮಾದಕ ಪಾನೀಯಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರವುಂಟು.  ಕೊಳೆತ ಕಿತ್ತಳೆ, ನಿಂಬೆ, ಮುಂತಾದ ಹಣ್ಣುಗಳ ಮೇಲೆ ಬೆಳೆಯುವ ಪೆನಿಸಿಲಿಯಮ್ ಶಿಲೀಂಧ್ರದ ಪ್ರಭೇದಗಳು ಪೆನಿಸಿಲಿನ್ ತಯಾರಿಕೆಯಲ್ಲಿ ಹಾಗೂ ಹಣ್ಣು ಮಾಗಲು ಸಹಾಯಕಾರಿ.  ಗೊಬ್ಬರ ಹಾಗೂ ಕೊಳೆವ ಮರದ ದಿಮ್ಮಿಗಳ ಮೇಲೆ ಬೆಳೆಯುವ ವಿವಿಧ ಅಣಬೆಗಳೂ ಸಹ ಪೂರ್ಣ ಪೂತಿಜನ್ಯಗಳು.

ಆವೃತ ಬೀಜಸಸ್ಯಗಳ ಪೈಕಿ ದ್ವಿದಳ ಸಸ್ಯಗಳಿಗಿಂತ ಏಕದಳ ಸಸ್ಯಗಳಲ್ಲಿ ಪೂತಿಜನ್ಯತೆ ಹೆಚ್ಚು.  ಕೆಲವು ಆರ್ಕಿಡುಗಳಲ್ಲಿ, ಬರ್ಮಾನಿಯೇಸೀ ಹಾಗೂ ಟ್ರೈಯುರಿಡೇಸೀ ಕುಟುಂಬದ ಅನೇಕ ಪ್ರಭೇದಗಳಲ್ಲಿ ಈ ಜೀವನಕ್ರಮವನ್ನು ಕಾಣಬಹುದು.  ದ್ವಿದಳ ಸಸ್ಯಗಳಲ್ಲಿ ಅಪರೂಪ ; ಜೆನ್ಸಿಯನೇಸೀ ಗುಂಪಿನ ಸಸ್ಯಗಳಲ್ಲಿ ಹಾಗೂ ಮಾನೋಟ್ರೋಪಗಳಲ್ಲಿ ಪೂರ್ಣ ಪೂತಿಜನ್ಯ ಸಸ್ಯಗಳಿವೆ.

ಇಂಥ ಜೀವನಕ್ರಮಕ್ಕೆ ತಕ್ಕಂತೆ ಇವುಗಳಲ್ಲಿ ಗಿಡದ ಅಂಗಗಳು ಸಾಕಷ್ಟು ಮಾರ್ಪಾಟಾಗಿವೆ.  ಅವಶ್ಯಕತೆಯಿಲ್ಲದ ಪತ್ರ ಹರಿತ್ತು ನಷ್ಟವಾಗಿರುವುದಲ್ಲದೆ ಎಲೆಗಳು ಕ್ಷೀಣಿಸಿ ಪೊರೆಗಳಂತಾಗಿವೆ.  ಭೂಮಿಯಲ್ಲಿ ಹುದುಗಿರುವ ಬೇರು ಹಾಗೂ ಪ್ರಕಾಂಡಗಳು ಹುಲುಸಾಗಿ ಬೆಳೆಯವು.  ಬೇರುರೋಮಗಳ ಬದಲಿಗೆ ಬೇರಿನ ಸುತ್ತ ಶಿಲೀಂಧ್ರಗಳಿಂದ ಕೂಡಿದ ಕವಚವಿದ್ದು ಭೂಮಿಯಿಂದ ಜೈವಿಕ ವಸ್ತುಗಳನ್ನು ಹೀರಲು ಸಸ್ಯ ಸಂಪೂರ್ಣವಾಗಿ ಶಿಲೀಂಧ್ರವನ್ನೇ ಅವಲಂಬಿಸುವಂತಾಗಿದೆ.  ಪೈನ್ ಮರಗಳಡಿಯಲ್ಲಿ ಬೆಳೆಯುವ ಕಾರಲೋರೈಜ ಆರ್ಕಿಡಿನಲ್ಲಿ ಬರಿಯ ಪ್ರಕಾಂಡವುಂಟು ; ಬೇರುಗಳೇ ಇಲ್ಲ.  ಪ್ರಕಾಂಡದ ಒಳಭಾಗದಲ್ಲೆಲ್ಲ ಶಿಲೀಂಧ್ರ ಹರಡಿದೆ.  ಪ್ರಕಾಂಡದಿಂದ ಹುಟ್ಟಿ ಭೂಮಿಯ ಮೇಲೆ ಮೂಡುವ ಹೂವಿನ ಟೊಂಗೆಯಲ್ಲಿ ಸಣ್ಣ ಪೊರೆ ಎಲೆಗಳಿವೆ.  ಮಾನೋಟ್ರೋಪ ಯೂನಿಪ್ಲೋರ ಎಂಬುದರಲ್ಲಿ ಕವಲೊಡೆದ ಬೇರಿನ ಜಾಲವೂ ಭೂಮಿಯ ಮೇಲೆ ಬೆಳೆಯುವ ಅರಿಶಿನ ಬಣ್ಣದ ಕಾಂಡವೂ ಇವೆ.  ಕಾಂಡದ ತುದಿಯಲ್ಲಿ ಒಂಟಿ ಹೂ ಅರಳುತ್ತದೆ.  ಎಲೆಗಳು ಪೊರೆಗಳಂತಾಗಿವೆ.  ಮಿಕ್ಕ ಅಂಗಗಳು ಸಾಕಷ್ಟು ಮಾರ್ಪಾಟಾಗಿದ್ದರೂ ಹೂಗಳು ಮಾತ್ರ ಇನ್ನಿತರ ಸಸ್ಯಗಳ ಹೂಗಳಷ್ಟೇ ಕ್ರಮಬದ್ಧವಾಗಿವೆ.  ಬೀಜಗಳು ಅತಿ ಚಿಕ್ಕವು ; ಗಣನೀಯ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತವೆ.  ಒಳಗಿನ ಭ್ರೂಣ ಅಸ್ಪಷ್ಟವಾಗಿದೆ.

ಪೂತಿಜನ್ಯ ಸಸ್ಯಗಳು ಯಾವುದೇ ಹವಾಗುಣಕ್ಕೆ ಸೀಮಿತವಲ್ಲ ; ಇವು ಎಲ್ಲ ಹವಾಗುಣಗಳಿಗೂ ಹೊಂದಿಕೊಂಡು ಬದುಕುತ್ತವೆ.  ದೊಡ್ಡ ಗಿಡಗಳು ಸಾಮಾನ್ಯವಾಗಿ ತೇವಪೂರಿತ ಅರಣ್ಯ ಪ್ರದೇಶಗಳಲ್ಲಿ ಹೆಚ್ಚು.  ಹಸುರು ಸಸ್ಯಗಳು ಬದುಕಲಾರದ ಪ್ರದೇಶಗಳಲ್ಲೂ ಪೂತಿಜನ್ಯ ಸಸ್ಯಗಳು ಜೀವಿಸಬಲ್ಲವು.  ಇದನ್ನು ಗಮನಿಸಿದರೆ ಪೂತಿಜನ್ಯತೆ ಉಳಿವಿಗಾಗಿ ಹೋರಾಟದಲ್ಲಿ ಬದುಕುಳಿಯಲು ಈ ಸಸ್ಯಗಳು ಆರಿಸಿ ಕವಲುದಾರಿ	ಎಂಬ	ಅಭಿಪ್ರಾಯ	ಮೂಡುತ್ತದೆ.                     (ಟಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ